assignment 10
ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಣ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸಂಕಷ್ಟದಲ್ಲಿವೆ, ಸವಾಲುಗಳನ್ನು ಎದುರಿಸುತ್ತಿವೆ. "ದೇಶವೊಂದನ್ನು ಸೋಲಿಸಲು ಯುದ್ಧ ಮಾಡಬೇಕಿಲ್ಲ ಆ ದೇಶದ ಶಿಕ್ಷಣ ಪದ್ಧತಿಯನ್ನು ನಾಶಮಾಡಿದರೆ ಸಾಕು" ಎಂಬುದು ಎಲ್ಲೋ ಕೇಳಿದ ಮಾತು. ಆದರೆ ಸದ್ಯದ ಸಮಯದಲ್ಲಿ ಎಲ್ಲಾ ದೇಶಗಳಲ್ಲಿ ಶಿಕ್ಷಣ ನೀಡುವುದು ದೊಡ್ಡ ಸವಾಲಾಗಿದೆ. ನಮ್ಮೆಲ್ಲರಿಗೂ ಈ ಕೋವಿಡ್ 19 ಒಂದೇ ಶತ್ರು. ಹಾಗಾಗಿ ನಾವೆಲ್ಲ ಸೇರಿ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳು ಸಾಗುವಂತೆ ಮಾಡಬೇಕಿರುವುದು ಅನಿವಾರ್ಯವಾಗಿದೆ. ಇಲ್ಲವಾದರೆ ಈಗಿನ ಪರಿಸ್ಥಿತಿ ಮುಂದಿನ ಮಕ್ಕಳ ಭವಿಷ್ಯದ ದುಸ್ಥಿತಿಗೆ ಕಾರಣವಾಗಬಹುದು. ಹಾಗಾದರೆ ನಾವು ಏನೆಲ್ಲ ಮಾಡಬಹುದು?
#ವಠಾರ ಶಾಲೆಗಳು
ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿ ಜಿ ವಿ ಎಸ್) ಯ ಪರಿಕಲ್ಪನೆಯಾದ ವಠಾರ ಶಾಲೆಗಳನ್ನು ಆರಂಭಿಸುವುದು ಈಗಿನ ಸನ್ನಿವೇಶದಲ್ಲಿ ಸೂಕ್ತವಾದದ್ದು. ವಠಾರ ಶಾಲೆಗಳಲ್ಲಿ ಇಂತಿಷ್ಟೇ ಮಕ್ಕಳನ್ನು ಸೇರಿಸಬೇಕೆಂಬ ನಿಯಮವಿಲ್ಲ. ಇಲ್ಲಿ ನಾಲ್ಕು ಮಕ್ಕಳಿಂದ ಹಿಡಿದು 10 ಮಕ್ಕಳವರೆಗೆ ಅಲ್ಲಿಯ ಸನ್ನಿವೇಶಕ್ಕನುಗುಣವಾಗಿ ಸೇರಿಸಿ ಶಿಕ್ಷಕರು 40 ನಿಮಿಷಗಳಿಂದ 60 ನಿಮಿಷಗಳವರೆಗೆ ಕಲಿಕೆಗೆ ಹಾಗೂ ಸ್ವ ಕಲಿಕೆಗೆ ಮಾರ್ಗದರ್ಶನ ನೀಡುವುದು. ವಠಾರ ಶಾಲೆಗಳಲ್ಲಿ ಓಣಿಗೆ (street) ಒಂದರಂತೆ ನೆರೆಹೊರೆ ಮಕ್ಕಳ ಗುಂಪುಗಳನ್ನು ರಚಿಸಿ ಅವರಿರುವ ಪ್ರದೇಶದಲ್ಲೆ ನಿರಂತರ ಕಲಿಕೆಗೆ ಅವಕಾಶಗಳು ದೊರೆಯುವಂತೆ ಚಟುವಟಿಕೆಗಳನ್ನು ನೀಡಬಹುದು. ನೆರೆಹೊರೆಯ, ಒಂದೇ ಪ್ರದೇಶದ ಮಕ್ಕಳು ನಾವೆಷ್ಟೇ ತಿಳಿಹೇಳಿದರೂ ಇನ್ನು ಒಟ್ಟಾಗಿ ಸೇರಿಯೇ ಆಟವಾಡುತ್ತಿದ್ದಾರೆ. ವಠಾರ ಶಾಲೆಗಳ ಮೂಲಕ ಅವರಿಗೆ ಶಿಕ್ಷಣ ನೀಡುವುದಷ್ಟೇ ಅಲ್ಲ, ಕೋವಿಡ್ 19 ರ ಕುರಿತಾಗಿ ಜಾಗೃತಿಯನ್ನು ಉಂಟುಮಾಡಬಹುದು. ವಠಾರ ಶಾಲೆಗಳಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಸೂಕ್ತ.
*ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡು ಕಲಿಕೆಗೆ ಮಾರ್ಗದರ್ಶನ ನೀಡುವುದು.
*ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಬಳಕೆ.
*ಒಬ್ಬರ ವಸ್ತುಗಳನ್ನು ಮತ್ತೊಬ್ಬರು ಮುಟ್ಟದಂತೆ, ಬಳಸದಂತೆ ನೋಡಿಕೊಳ್ಳುವುದು.
*ನೃತ್ಯ, ಹೊರಾಂಗಣ ಆಟಗಳು, ಕೋರಸ್ ಹಾಡುಗಳು ಮುಂತಾದ ಚಟುವಟಿಕೆಗಳನ್ನು ಮಾಡದಂತೆ ನೋಡಿಕೊಳ್ಳುವುದು.
#ಕೆಲವು ಆಯ್ದ ಪ್ರದೇಶಗಳಲ್ಲಿ ಶಾಲೆಗಳನ್ನು ಆರಂಭಿಸುವುದು
ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ತೋಟದ ವಸತಿ (ಅಡವಿ ವಸತಿ) ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 15 ರಿಂದ 30 ಇರುವುದು. ಇಂತಹ ಕಡೆ ಸಾಮಾಜಿಕ ಅಂತರ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ಆರಂಭಿಸಬಹುದು. ಈಗಿನ ಪ್ರತಿ ಶಾಲೆಗಳಲ್ಲೂ ಕನಿಷ್ಠ ಎರಡು ಕೋಣೆಗಳಿವೆ. ಅದರ ಮುಂದೆ ವರಾಂಡ, ಮೈದಾನವಿರುತ್ತದೆ. ಮೂರು ಕೋಣೆಗಳು, ಮೂರು ವರಾಂಡಗಳಲ್ಲಿ 30 ಮಕ್ಕಳನ್ನು ಹಂಚಿಕೆ ಮಾಡಿದರೆ ಕೇವಲ ಐದು ಮಕ್ಕಳನ್ನು ಅಲ್ಲಲ್ಲಿ ದೂರ ದೂರ ಕೂಡಿಸಬಹುದು. ಕಡಿಮೆ ಮಕ್ಕಳಿರುವ, ಹೆಚ್ಚು ಶಿಕ್ಷಕರಿರುವ, ಹೆಚ್ಚು ಕೋಣೆಗಳಿರುವ ಶಾಲೆಗಳನ್ನು ಯೋಜನಾಬದ್ಧವಾಗಿ ಆರಂಭಿಸಬಹುದು.
#ದಿನಕ್ಕೊಂದು ತರಗತಿ
ಸರಕಾರಿ ಶಾಲೆಗಳ ಧನಾತ್ಮಕ ಅಂಶವೆಂದರೆ ಶಾಲೆಯ ಅಕ್ಕಪಕ್ಕದ ಮಕ್ಕಳು ವಿದ್ಯಾರ್ಥಿಗಳಾಗಿರುವುದು. ಅವರು ವಾಹನ ಬಳಸದೆ ಶಾಲೆಗೆ ಬರುತ್ತಾರೆ. ಇಂತಹ ಪ್ರದೇಶಗಳಲ್ಲಿ ದಿನಕ್ಕೊಂದರಂತೆ ತರಗತಿಗಳನ್ನು ನಡೆಸಬಹುದು ಉದಾಹರಣೆಗೆ ಮೊದಲ ದಿನ ಒಂದನೇ ತರಗತಿ ನಂತರದ ದಿನ ಎರಡನೆಯ ತರಗತಿ ಹೀಗೆಯೆ ಕ್ರಮವಾಗಿ ಪ್ರತಿದಿನ ಒಂದು ತರಗತಿ ನಡೆಸುವುದು. ಹೀಗೆ ಮಾಡುವಾಗ ಶಾಲೆಯ ಎಲ್ಲಾ ಶಿಕ್ಷಕರು ಪ್ರತಿದಿನವೂ ಆ ತರಗತಿಯ ಮಕ್ಕಳಿಗೆ ಕಲಿಸುವುದು. ಉದಾಹರಣೆಗೆ ಇಂದು ಒಂದನೆಯ ತರಗತಿಯ ಮಕ್ಕಳು ಶಾಲೆಗೆ ಬಂದರು ಎಂದಿಟ್ಟುಕೊಂಡರೆ, ಆ ಎಲ್ಲಾ ಮಕ್ಕಳನ್ನು ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರಿಗೆ ಸಮಾನವಾಗಿ ಹಂಚಿ ಜವಾಬ್ದಾರಿ ವಹಿಸುವುದು. ಪ್ರತಿ ಶಿಕ್ಷಕರು ತಮಗೆ ವಹಿಸಿದ ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ವಿಷಯಗಳನ್ನು ಬೋಧನೆ ಮಾಡಿ, ನಂತರದಲ್ಲಿ ಒಂದು ವಾರಕ್ಕಾಗುವಷ್ಟು ಮನೆಗೆಲಸ ನೀಡುವುದು.
#ಮನೆ ಮನೆ ಭೇಟಿ
ಕೋವಿಡ್ 19 ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಶಿಕ್ಷಕರು ವಾರಕ್ಕೊಮ್ಮೆ ವಿದ್ಯಾರ್ಥಿಯು ಇರುವ ಪ್ರದೇಶಕ್ಕೆ ಭೇಟಿ ನೀಡಿ ಅವರ ಸ್ವ ಕಲಿಕೆಗೆ ಮಾರ್ಗದರ್ಶನ ನೀಡುವುದು. ಇಲ್ಲಿ ಪಾಲಕರ ಮೂಲಕ ಕಲಿಕೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು.
# ಪಠ್ಯಪುಸ್ತಕ ಅಭ್ಯಾಸ ಪುಸ್ತಕ ಮುಂತಾದವುಗಳು ಮೂಲಕ ಸ್ವ ಕಲಿಕೆ
ಪಠ್ಯಪುಸ್ತಕಗಳು ವರ್ಕ್ ಶೀಟುಗಳು, ಅಭ್ಯಾಸ ಪುಸ್ತಕಗಳು, ಹಳೆಯ ಪಠ್ಯಪುಸ್ತಕಗಳು, ಕತೆ ಪುಸ್ತಕಗಳು, ಹಳೆಯ ದಿನಪತ್ರಿಕೆಯ ಪದಬಂಧಗಳು ಮುಂತಾದವನ್ನು ಮಕ್ಕಳ ಸ್ವ ಕಲಿಕೆಗಾಗಿ ಶಿಕ್ಷಕರು ಒದಗಿಸಬೇಕು. ಇವೆಲ್ಲವನ್ನು ಬಳಸಿಕೊಂಡು ಮಕ್ಕಳ ಕಲಿಕೆಗೆ ನಿರಂತರತೆ ಇರುವಂತೆ ನೋಡಿಕೊಳ್ಳಬೇಕು. ಇಲ್ಲಿ ಕಲಿಯುವುದನ್ನು ಕಲಿಸುವುದು ಎಂಬ ತತ್ವ ಅನುಸರಿಸಬೇಕಾಗುತ್ತದೆ.
#ಆನ್ಲೈನ್ ಶಿಕ್ಷಣ ಹಾಗೂ ದೂರದರ್ಶನದ ಉಪಯೋಗ
ಲ್ಯಾಪ್ಟಾಪ್, ಮೊಬೈಲ್ ಮನೆಯಲ್ಲಿ ಇರುವ ಮಕ್ಕಳ ವಿವರಗಳನ್ನು ಸಂಗ್ರಹಿಸಿ ಅವರಿಗೆ ಶಿಕ್ಷಕರು ವಿವಿಧ ವಿಡಿಯೋ ಆಪ್ ಗಳ ಮೂಲಕ ಆನ್ ಲೈನ್ ನಲ್ಲಿಯೇ ಪಾಠಗಳನ್ನು ಬೋಧಿಸಬಹುದು. ದೂರದರ್ಶನದ ಮೂಲಕ ಈಗಾಗಲೇ ಸೇತುಬಂಧ ಪಾಠಗಳು ಪ್ರಸಾರವಾಗುತ್ತಿವೆ. ಈ ಪಾಠಗಳು ಒಂದನೆಯ ತರಗತಿಯಿಂದ ಮುಂದಿನ ಎಲ್ಲಾ ತರಗತಿಯ ಮಕ್ಕಳಿಗೆ ದೊರೆಯುವಂತೆ ರೂಪಿಸಬಹುದು.
ಶಾಲೆಗಳನ್ನು ಹೀಗೆಯೇ ಬಹಳ ದಿನಗಳ ಕಾಲ ತೆರೆಯದೆ ಬಿಟ್ಟರೆ, ಶಿಕ್ಷಕರು ಮಕ್ಕಳನ್ನು ತಲುಪದೆ ಇದ್ದರೆ, ಮಕ್ಕಳ ಕಲಿಕೆ ನಿರಂತರವಾಗಿ ಆಗುವಂತೆ ನೋಡಿಕೊಳ್ಳದೆ ಇದ್ದರೆ ಇದು ದೂರಗಾಮಿ ದುಷ್ಪರಿಣಾಮಗಳನ್ನು ಬೀರುವುದಂತೂ ಖಂಡಿತ. ಶಿಕ್ಷಣದೊಂದಿಗೆ ಅಕ್ಷರ ದಾಸೋಹ ಯೋಜನೆ ಕೂಡ ನಿಂತಿರುವುದರಿಂದ ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದಲೂ ಅಪಾಯಗಳು ಉಂಟಾಗುತ್ತವೆ. ಕೋವಿಡ್ 19ರ ಪೆಂಡಮಿಕ್ ಯಾವಾಗ ಅಂತ್ಯವಾಗುತ್ತದೆ ಎಂದು ಯಾರಿಗೂ ಹೇಳಲಾಗುತ್ತಿಲ್ಲ. ಮಾನ್ಯ ಪ್ರಧಾನಿಯವರು ಹೇಳಿದಂತೆ ನಾವು ಇದರೊಂದಿಗೆ ಬದುಕಬೇಕಾಗಿದೆ, ಜೀವನವನ್ನು ಕಟ್ಟಿಕೊಳ್ಳಬೇಕಿದೆ, ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಕರ್ನಾಟಕದ ಖ್ಯಾತ ವೈದ್ಯರು, ಬರಹಗಾರರು ಆದ ಶ್ರೀನಿವಾಸ್ ಕಕ್ಕಿಲಾಯ ಅವರು ಶಾಲೆಗಳನ್ನು ಆರಂಭಿಸಲು ಸಲಹೆ ನೀಡಿದ್ದಾರೆ. ಲಭ್ಯವಿರುವ ಎಲ್ಲಾ ಮಾರ್ಗೋಪಾಯಗಳನ್ನು ಬಳಸಿ ಆಯಾ ಪ್ರದೇಶಕ್ಕೆ ಸೂಕ್ತವಾದ ಯೋಜನೆಗಳನ್ನು ರೂಪಿಸಿಕೊಂಡು ಶಿಕ್ಷಣ ನಿರಂತರವಾಗಿರುವಂತೆ ಮಾಡಬೇಕಿದೆ. ಇದು ಯೋಚಿಸಿ, ಯೋಜಿಸಿ, ಕಾರ್ಯ ಪ್ರವೃತ್ತರಾಗಬೇಕಾದ ಸಮಯವಾಗಿದೆ.
Comments